ತಿಕ್ಕನ ಸೋಮಯಾಜಿ
	1200-1280. ಆಂದ್ರ ಮಹಾ ಭಾರತವನ್ನು ರಚಿಸಿರುವ ಕವಿತ್ರಯರಲ್ಲಿ ಎರಡನೆಯವ. ಮೊದಲಿನವ ನನ್ನಯಭಟ್ಟ, ಮೂರನೆಯವ ಎರ್ರಾಪ್ರೆಗ್ಗಡ. ತಿಕ್ಕನ ವಿರಾಟಪರ್ವದಿಂದ ಹಿಡಿದು ಸ್ವರ್ಗಾ ರೋಹಣ ಪರ್ವದವರೆಗೂ 15 ಪರ್ವಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ವಿರಾಟೋದ್ಯೋಗ ಪರ್ವಗಳು ಆಂಧ್ರದಲ್ಲಿ ಜನಪ್ರಿಯವಾಗಿವೆ. 

	13ನೆಯ ಶತಾಬ್ಧಿಯ ಪೂರ್ವಭಾಗದಲ್ಲಿ ನೆಲ್ಲೂರನ್ನು ಆಳುತ್ತಿದ್ದ ಮನುಮ ಸಿದ್ಧಿಯ ಆಶ್ರಯದಲ್ಲಿ ಮಂತ್ರಿಯೂ ಆಸ್ಥಾನಕವಿಯೂ ಆಗಿ ವರಾಜಿಸುತ್ತಿದ್ದ ತಿಕ್ಕನ ವಾಲ್ಮೀಕ ರಾಮಾಯಣದ ಉತ್ತರ ಕಾಂಡವನ್ನು ನಿರ್ವಚನೋತ್ತರ ರಾಮಾಯಣವೆಂಬ ಕಾವ್ಯವಾಗಿ ತೆಲುಗಿನಲ್ಲಿ ಬರೆದು ಅದನ್ನು ತನ್ನ ಆಶ್ರಯದಾತನಿಗೆ ಅರ್ಪಣೆ ಮಾಡಿದ್ದಾನೆ. ಭಾರತವನ್ನು ಮಾತ್ರ ಹರಿಹರನಾಥಸ್ವಾಮಿಗೆ ಅಂಕಿತಮಾಡಿ ಹರಿಹರಾದ್ವೈತ ತತ್ತ್ವವನ್ನು ಸಾರಿದ್ದಾನೆ. 12ನೆಯ ಶತಮಾನದಲ್ಲಿ ವೀರಶೈವ ಮತದೊಡನೆ ವೈಷ್ಣವ ಮತವೂ ಆಂಧ್ರದಲ್ಲಿ ಪ್ರಚಾರಗೊಂಡಿತು. ಈ ಎರಡೂ ಮತಗಳಲ್ಲಿ ಸಾಮರಸ್ಯವನ್ನುಂಟುಮಾಡಿ ಸಮಾಜದಲ್ಲಿ ಶಾಂತಿಯನ್ನುಂಟು ಮಾಡಿದವ ತಿಕ್ಕನ. 

	ಮಹಾಭಾರತವನ್ನು ಅನುವಾದ ಮಾಡುವಲ್ಲಿ ತಿಕ್ಕನ ಮೂಲದಲ್ಲಿರುವ ಕೆಲವು ಭಾಗಗಳನ್ನು ತಗ್ಗಿಸಿಯೂ ಕೆಲವು ವರ್ಣನೆಗಳನ್ನು ಸ್ವತಂತ್ರವಾಗಿ ರಚಿಸಿಯೂ ಅನುಚಿತವೆಂದು ತೋರಿದವುಗಳನ್ನು ತಿದ್ದಿಯೂ ಮೆರಗುಕೊಟ್ಟು ತನ್ನ ಕೃತಿಯನ್ನು ಒಂದು ಸ್ವತಂತ್ರ ಕಾವ್ಯವಾಗುವಂತೆ ಮಾಡಿದ್ದಾನೆ. 

	ಮಾಂತ್ರಿಯೂ ರಾಜನೀತಿ ಕುಶಲನೂ ಆದುದರಿಂದ ತಿಕ್ಕನ ಉದ್ಯೋಗ ಪರ್ವದಲ್ಲಿ ಶ್ರೀಕೃಷ್ಣನ ಮುಖಾಂತರವಾಗಿ ರಾಜನೀತಿಕುಶಲತೆಯನ್ನು ಎಷ್ಟೋ ವಿಭಿನ್ನ ರೀತಿಗಳಲ್ಲಿ ಪ್ರಕಟಿಸಿದ್ದಾನೆ. ಅವನ ವರ್ಣನೆಗಳು ಹೆಚ್ಚಾಗಿ ಬಾಹ್ಯ ಸ್ವರೂಪಗಳನ್ನಲ್ಲದೆ ಅಂತರಿಕ ಕಾಂತಿ ಸೌಂದರ್ಯಗಳನ್ನು ಸೂಕ್ಷ್ಮವಾಗಿ ವಿವರಿಸುತ್ತವೆ. ಅವನ ಯುದ್ಧವರ್ಣನೆಗಳು ಸಹಜವಾಗಿದೆ. 

	ತಿಕ್ಕನನ ಶೈಲಿ ಮುಖ್ಯವಾಗಿ ಸಂಭಾಷಣಾ ರೂಪದ್ದು. ಸಂಭಾಷಣೆಯ ಮೂಲಕವೇ ರಮ್ಯವಾಗಿ ಮುಂದೆ ಸಾಗುತ್ತದೆ. ಸಾಧ್ಯವಾದಷ್ಟು ದೇಸೀ ಪದಗಳನ್ನು ನಾಣ್ನುಡಿಗಳನ್ನು ಉಪಯೋಗಿಸಿರುವುದರಿಂದ ಓದುಗರಿಗಿದು ಬಹು ಪ್ರಿಯ, ವೀರ, ರೌದ್ರ ರಸಗಳನ್ನು ಘೋಷಿಸುವ ಪ್ರಸಂಗ ಬಂದಾಗ ಸಂಸ್ಕøತ ಪದಗಳು ಸಂಸ್ಕøತ ಸಮಾಸಗಳು ಬರುತ್ತವೆ. ರಸೋಜಿತ ಪದ ಪ್ರಯೋಗಗಳನ್ನು ಮಾಡುವ ಪದ್ಧತಿಯಲ್ಲೂ ಸಂದರ್ಭೋಚಿತವಾಗಿ ವೃತ್ತಗಳನ್ನು ರಚಿಸುವುದರಲ್ಲಯೂ ಇವನು ಬಹು ನಿಪುಣ. ಇದನ್ನು ಗಮನಿಸಿದಾಗ ಇವನಿಗೆ ಕವಿಬ್ರಹ್ಮ ಮತ್ತು ಉಭಯ ಕವಿ ಮಿತ್ರ ಎಂಬ ಬಿರುದುಗಳು ಬಂದುದು ಸಾರ್ಥಕವೆನಿಸುತ್ತದೆ. 

	ತಿಕ್ಕನ ಸಮಕಾಲೀನರಲ್ಲಿ ಕೇತನ ಕವಿಯೂ ಮಾರನ ಕವಿಯೂ ಮುಖ್ಯರು. ದಂಡಿಯ ದಶಕುಮಾರ ಚರಿತ್ರೆಯನ್ನು ಕೇತನ ಚಂಪೂಕಾವ್ಯವಾಗಿ ತೆಲುಗಿನಲ್ಲಿ ರಚಿಸಿ ತಿಕ್ಕನನಿಗೆ ಅಂಕಿತ ಮಾಡಿದ್ದಾನೆ. ಮಾರನಕವಿ ತಿಕ್ಕನನ ಶಿಷ್ಯ. ಕೃಷ್ಣದೇವರಾಯನ ಕೋರಿಕೆಯ ಮೇಲೆ ಕನ್ನಡದ ತಿಮ್ಮಣ್ಣ ಕವಿ ಕುಮಾರವ್ಯಾಸ ರಚಿಸದೇ ಬಿಟ್ಟಿರುವ ಭಾರತದ ಕಡೆಯ ಎಂಟು ಪರ್ವಗಳನ್ನು ತಿಕ್ಕನನನ್ನು ಅನುಸರಿಸಿ ರಚಿಸಿದ್ದಾನೆ. 

	ಅನಾವೃಷ್ಟಿಯಾದಾಗ ತಿಕ್ಕನನ ವಿರಾಟಪರ್ವವನ್ನು ಓದಿಸಿದರೆ ಸುವೃಷ್ಟಿಯಾಗುತ್ತದೆಂಬ ಪ್ರಬಲವಾದ ನಂಬಿಕೆ ಈಗಲೂ ಆಂಧ್ರದ ಹಳ್ಳಗಳಲ್ಲಿ ಉಂಟು. 							(ಕೆ.ಎಸ್.ಯು.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ